FIFA WC: ಜೂನ್ 11 ರಂದು ನಡೆದ ವಿಶ್ವಕಪರ್ಹತ ಪಂದ್ಯದಲ್ಲಿ ಕಳಪೆ ರೆಫ್ರಿಯ ಕಾರಣದಿಂದ ಭಾರತವು ಕತಾರ್ ವಿರುದ್ಧ 2-1 ಅಂತರದ ಸೋಲನ್ನು ಅನುಭವಿಸಿದ್ದು, ಮತ್ತೊಂದು ಕಡೆ ಕುವೈತ್ ಅಫ್ಘಾನಿಸ್ತಾನವನ್ನು 1-0 ಅಂತರದಲ್ಲಿ ಸೋಲಿಸಿರುವುದರ ಪರಿಣಾಮ ಭಾರತದ ಮೂರನೇ ಸುತ್ತಿನ ಕನಸು ಭಗ್ನಗೊಂಡಿದೆ.
ಜೂನ್ 11ರಂದು ದೋಹದಲ್ಲಿ ನಡೆದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತವು ಕತಾರ್ ವಿರುದ್ಧ 2-1 ಅಂತರದ ವಿವಾದಾತ್ಮಕ ಸೋಲನ್ನು ಅನುಭವಿಸಿದ್ದು, ಇದಕ್ಕೆ ಕಳಪೆ ರೆಫ್ರಿ ಕಾರಣ ಎಂದು ಹೇಳಲಾಗುತ್ತಿದೆ.
ದೋಹಾದ ಜಸ್ಸಿಮ್ ಬಿನ್ ಹಮದ್ ಸ್ಟೇಡಿಯಂನಲ್ಲಿ ಕತಾರ್ ವಿರುದ್ಧದ ಭಾರತದ ಫಿಫಾ ವಿಶ್ವಕಪ್ 2026 ರ ಅರ್ಹತಾ ಪಂದ್ಯದ ಸಂದರ್ಭದಲ್ಲಿ, ಕತಾರ್‌ನ ಯೂಸೆಫ್ ಐಮೆನ್ ಅವರ ವಿವಾದಾತ್ಮಕ ಗೋಲು ಭಾರತೀಯ ತಂಡದ ನಾಯಕ ಗುರುಪ್ರೀತ್ ಸಿಂಗ್ ಸಂಧು ಮತ್ತು ಉಳಿದ ಆಟಗಾರರು ಕೆರಳುವಂತೆ ಮಾಡಿತು.
ಅಸಲಿಗೆ ನಡೆದದ್ದು ಏನು?
ನಾಯಕ ಸಂಧು ಹೆಡರ್ ಅನ್ನು ಉಳಿಸಿದ ನಂತರ, ಚೆಂಡು ಸ್ಪಷ್ಟವಾಗಿ ಆಟದಿಂದ ಹೊರಗುಳಿದಿತ್ತು. ಆದರೆ, ತೀರ್ಪುಗಾರರು ಅದನ್ನು ಗುರುತಿಸಲಿಲ್ಲ. ಭಾರತದ ಆಟಗಾರರು ಚೆಂಡು ಆಟದಿಂದ ಹೊರಗಿದೆ ಎಂದು ಭಾವಿಸಿ ಆಟವಾಡುವುದನ್ನು ನಿಲ್ಲಿಸಿದರು. ಆದರೆ ಚೆಂಡನ್ನು ಅಲ್ ಹಸನ್ ಮರಳಿ ತಂದು ಅಯ್ಮೆನ್ ಭಾರತೀಯ ನೆಟ್‌ನೊಳಗೆ ಹಾಕಿದರು. ವೀಡಿಯೊ ಸಹಾಯಕ ರೆಫರಿ (VAR) ಇಲ್ಲದ ಕಾರಣ, ಅದನ್ನು ಪರಿಶೀಲಿಸಲಾಗಲಿಲ್ಲ.
ವಾಡಿಕೆಯಂತೆ ಕಾರ್ನರ್ ಕಿಕ್ ಆಗಬೇಕಾಗಿರುವುದು ಆಟದ ಬದಲಾವಣೆಯ ಕ್ಷಣವಾಗಿ ಮಾರ್ಪಟ್ಟಿತು. ಇದು ಭಾರತೀಯ ಆಟಗಾರರನ್ನು ದಿಗ್ಭ್ರಮೆಗೊಳಿಸಿ ಅವರನ್ನು ನಿರಾಶಿತರನ್ನಾಗುವಂತೆ ಮಾಡಿತು. ನಂತರದಲ್ಲಿ ತಂಡದ ನಾಯಕ ಹಾಗೂ ಆಟಗಾರರು ಎಷ್ಟೇ ಪ್ರಶ್ನಿಸಿದರು ರೆಫರಿಗಳು ತೃಪ್ತಿಕರ ವಿವರಣೆಯನ್ನು ನೀಡಲಿಲ್ಲ.
ಈ ಹಿನ್ನೆಲೆಯಲ್ಲಿ ಭಾರತ ಕತಾರ್ ವಿರುದ್ಧ 2-1 ಅಂತರದಲ್ಲಿ ಸೋತು ತನ್ನ 3 ನೇ ಹಂತದ ಕನಸನ್ನು ಕೈ ಚೆಲ್ಲಿದೆ.